07/09/2026
‘ಭಾವಪೂರ್ಣ ನಮನ’
ಜಯಕರ್ನಾಟಕ ಜನಪರ ವೇದಿಕೆಯಿಂದ ಆರ್. ಚಂದ್ರಪ್ಪ ಅವರಿಗೆ ಅರ್ಥಪೂರ್ಣವಾಗಿ ‘ಭಾವಪೂರ್ಣ ನಮನ’ ಸಲ್ಲಿಕೆ,
ಕಾರ್ಯಕ್ರಮದಲ್ಲಿ
ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಹೋರಾಟಗಾರರು ಹಾಗೂ ವೇದಿಕೆಯ ಪದಾಧಿಕಾರಿಗಳಿಂದ ಅಂತಿಮ ಗೌರವ
ಆತ್ಮೀಯರೆ,
“ವ್ಯಕ್ತಿ ಮರೆಯಾಗಬಹುದು… ಆದರೆ ಅವರು ಬಿತ್ತಿದ ಆದರ್ಶಗಳು ಹಾಗೂ ಹೋರಾಟದ ಹೆಜ್ಜೆ ಗುರುತುಗಳು ಎಂದಿಗೂ ಮರೆಯಾಗುವುದಿಲ್ಲ.”
ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹಾಗೂ ಸಲಹೆಗಾರರಾಗಿ ಸಂಘಟನೆಯ ಬಲವರ್ಧನೆಗೆ ಅಮೂಲ್ಯ ಸೇವೆ ಸಲ್ಲಿಸಿದ, ಆತ್ಮೀಯರು ಹಾಗೂ ಮಾರ್ಗದರ್ಶಕರಾಗಿದ್ದ ಶ್ರೀಯುತ ಆರ್. ಚಂದ್ರಪ್ಪ ಅವರ ಜನಪರ ಸೇವೆ, ಹೋರಾಟದ ಬದುಕು ಹಾಗೂ ಸಂಘಟನೆಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರಿ ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ಬೆಂಗಳೂರಿನ ಬಾಪು ಆಡಿಟೋರಿಯಂ, ಗಾಂಧಿ ಭವನದಲ್ಲಿ ‘ಭಾವಪೂರ್ಣ ನಮನ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆರ್. ಚಂದ್ರಪ್ಪ ಅವರ ಸೇವಾ ಬದುಕು, ಕನ್ನಡ ನಾಡು–ನುಡಿ, ಜನಪರ ಹೋರಾಟ ಹಾಗೂ ಸಂಘಟನೆಯ ಬಲವರ್ಧನೆಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು. ಅವರೊಂದಿಗೆ ಒಡನಾಟ ಹೊಂದಿದ್ದ ಗಣ್ಯರು ಹಾಗೂ ಹೋರಾಟಗಾರರು ತಮ್ಮ ನೆನಪುಗಳನ್ನು ಹಂಚಿಕೊಂಡ ಸಂದರ್ಭದಲ್ಲಿ ಕಾರ್ಯಕ್ರಮ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಶ್ರೀ ಸಾ.ರಾ. ಗೋವಿಂದ್, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ. ಗುಣರಂಜನ್ ಶೆಟ್ಟಿ, ಆರ್. ಚಂದ್ರಪ್ಪ ಅವರ ಪತ್ನಿ ಶ್ರೀಮತಿ ಉಮಾವತಿ ಆರ್. ಚಂದ್ರಪ್ಪ ಹಾಗೂ ಕುಟುಂಬದ ಸದಸ್ಯರು, ವೇದಿಕೆಯ ರಾಜ್ಯಾಧ್ಯಕ್ಷರಾದ ಜೆ. ಶ್ರೀನಿವಾಸ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
ಅಲ್ಲದೆ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ, ಜಿಲ್ಲಾ, ತಾಲ್ಲೂಕು, ಕ್ಷೇತ್ರ, ಮಹಿಳಾ ಘಟಕ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮೆಲ್ಲರ ಪ್ರೀತಿಯ ಆರ್. ಚಂದ್ರಪ್ಪ ಅವರಿಗೆ ಅಂತಿಮ ಗೌರವ ಹಾಗೂ ಭಾವಪೂರ್ಣ ನಮನ ಸಲ್ಲಿಸಿದರು.
ಆರ್. ಚಂದ್ರಪ್ಪ ಅವರ ಅಗಲಿಕೆ ಸಂಘಟನೆಗೆ ಹಾಗೂ ಕನ್ನಡಪರ ಹೋರಾಟದ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರು ತೋರಿದ ಹೋರಾಟದ ಹಾದಿ, ಜನಪರ ಕಾಳಜಿ ಮತ್ತು ಸಂಘಟನಾ ಚಿಂತನೆಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿರಲಿವೆ.
“ಚಂದ್ರಪ್ಪ ಅವರು ನಮ್ಮೊಂದಿಗಿಲ್ಲದಿರಬಹುದು; ಆದರೆ ಅವರ ಆದರ್ಶ, ಹೋರಾಟದ ಹೆಜ್ಜೆ ಗುರುತುಗಳು ಹಾಗೂ ಕನ್ನಡ ನಾಡು–ನುಡಿಯ ಮೇಲಿನ ಕಾಳಜಿ ಎಂದೆಂದಿಗೂ ನಮ್ಮೊಂದಿಗೆ ಜೀವಂತವಾಗಿರುತ್ತದೆ.”
ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.